20
ಅಬ್ರಹಾಮನು ಮತ್ತು ಅಬೀಮೆಲೆಕನು
1
ಅಬ್ರಹಾಮನು ಅಲ್ಲಿಂದ ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸ ಮಾಡಿ ಕೆಲವು ಕಾಲ ಗೆರಾರಿನಲ್ಲೂ ವಾಸಮಾಡಿದನು.
2
ಅವನು ತನ್ನ ಹೆಂಡತಿಯಾದ ಸಾರಳನ್ನು ತಂಗಿಯೆಂದು ಹೇಳಿಕೊಂಡದ್ದರಿಂದ, ಗೆರಾರಿನ ಅರಸನಾದ ಅಬೀಮೆಲೆಕನು ಆಕೆಯನ್ನು ಕರೆಸಿ ತನ್ನ ಮನೆಯಲ್ಲಿ ಇರಿಸಿಕೊಂಡನು.
3
ಆದರೆ ಆ ರಾತ್ರಿ ದೇವರು ಅಬೀಮೆಲೆಕನ ಕನಸಿನಲ್ಲಿ ಬಂದು, <<ನೀನು ಆ ಸ್ತ್ರೀಯನ್ನು ಸೇರಿಸಿಕೊಂಡಿರುವುದರಿಂದ ಮರಣಕ್ಕೆ ಯೋಗ್ಯನಾಗಿದ್ದಿ; ಆಕೆ ಮತ್ತೊಬ್ಬ ಪುರುಷನ ಹೆಂಡತಿ>> ಎಂದನು.
4
ಅಬೀಮೆಲೆಕನು ಆಕೆಯನ್ನು ಸಂಗಮಿಸಿರಲಿಲ್ಲ. ಅವನು, <<ಕರ್ತನೇ, ನೀತಿವಂತರಾದ ಜನರನ್ನೂ ನಾಶಮಾಡುವಿಯಾ?
5
ಆ ಮನುಷ್ಯನು ಈಕೆ ತನಗೆ ತಂಗಿಯಾಗಬೇಕೆಂದು ಹೇಳಿದನು. ಈಕೆಯೂ ಅವನು ತನಗೆ ಅಣ್ಣನಾಗಬೇಕೆಂದು ಹೇಳಿದಳು. ನಾನು ಯಥಾರ್ಥ ಮನಸ್ಸಿನಿಂದಲೂ, ಶುದ್ಧ ಹಸ್ತದಿಂದಲೂ ಇದನ್ನು ಮಾಡಿದೆನು>> ಎಂದನು.
6
ಅದಕ್ಕೆ ದೇವರು, <<ನೀನು, ಇದನ್ನು ಯಥಾರ್ಥ ಮನಸ್ಸಿನಿಂದ ಮಾಡಿದೆ ಎಂಬುದನ್ನು ನಾನು ಬಲ್ಲೆ; ಆದಕಾರಣ ನೀನು ನನಗೆ ವಿರುದ್ಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ.
7
ಹೀಗಿರುವಲ್ಲಿ ಆ ಮನುಷ್ಯನ ಹೆಂಡತಿಯನ್ನು ಅವನಿಗೆ ಒಪ್ಪಿಸಿಬಿಡು. ಅವನು ಪ್ರವಾದಿ, ನಿನಗೋಸ್ಕರ ಅವನು ನನಗೆ ವಿಜ್ಞಾಪಿಸುವನು ಮತ್ತು ನೀನು ಬದುಕುವಿ. ಆಕೆಯನ್ನು ಒಪ್ಪಿಸದಿದ್ದರೆ ನೀನೂ ನಿನ್ನವರೆಲ್ಲರೂ ಮರಣಹೊಂದುವಿರಿ ಇದು ಖಂಡಿತ ಎಂದು ತಿಳಿದುಕೋ>> ಎಂದು ಕನಸಿನಲ್ಲಿ ಹೇಳಿದನು.
8
ಬೆಳಿಗ್ಗೆ ಅಬೀಮೆಲೆಕನು ತನ್ನ ಸೇವಕರೆಲ್ಲರನ್ನು ಕೂಡಿಸಿ ಈ ಸಂಗತಿಗಳನ್ನೆಲ್ಲಾ ತಿಳಿಸಲು ಅವರು ಬಹಳ ಭಯಪಟ್ಟರು.
9
ಅಬೀಮೆಲೆಕನು ಅಬ್ರಹಾಮನನ್ನು ಕರೆದು, <<ನೀನು ನಮಗೆ ಮಾಡಿದ್ದೇನು? ನಾನು ಯಾವ ಪಾಪ ಮಾಡಿದ್ದರಿಂದ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಮಹಾಪಾತಕಕ್ಕೆ ಒಳಪಡಿಸಿದಿ? ನೀನು ಮಾಡಬಾರದ ಕಾರ್ಯಗಳನ್ನು ಮಾಡಲು ನಾನು ನಿನಗೇನು ಮಾಡಿದೆ>> ಎಂದು ಹೇಳಿ,
10
<<ನೀನು ಯಾವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದೆ>> ಎಂದು ಅಬೀಮೆಲೆಕನು ಅಬ್ರಹಾಮನನ್ನು ಕೇಳಿದನು.
11
ಅದಕ್ಕೆ ಅಬ್ರಹಾಮನು, <<ಈ ಸ್ಥಳದವರು ದೇವರ ಭಯಭಕ್ತಿ ಇಲ್ಲದವರಾಗಿ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರೆಂದು ಭಾವಿಸಿದೆನು.
12
ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ, ನನ್ನ ತಂದೆಯ ಮಗಳೇ; ಆದರೆ ನನ್ನ ತಾಯಿಯ ಮಗಳಲ್ಲವಾದುದರಿಂದ ನನಗೆ ಹೆಂಡತಿಯಾದಳು.
13
ನಾನು ದೇವರ ಸಂಕಲ್ಪದಿಂದ ತಂದೆಯ ಮನೆಯನ್ನು ಬಿಟ್ಟು ದೇಶಾಂತರ ಹೋಗುವುದಕ್ಕೆ ಹೊರಟಾಗ ನಾನು ಆಕೆಗೆ, <ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ದಯೆ ಆಗಬೇಕು. ಅದು, ಏನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ ಹೇಳಬೇಕು> ಎಂದು ತಿಳಿಸಿದೆನು>> ಎಂದನು.
14
ಆಗ ಅಬೀಮೆಲೆಕನು ಅಬ್ರಹಾಮನಿಗೆ ಕುರಿದನಗಳನ್ನೂ ದಾಸದಾಸಿಯರನ್ನೂ ಕೊಟ್ಟು, ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿ,
15
<<ಇಗೋ, ಇದು ನನ್ನ ದೇಶ; ಇದರೊಳಗೆ ನಿನಗೆ ಇಷ್ಟವಿದ್ದ ಕಡೆಯಲ್ಲಿ ನೀನು ವಾಸ ಮಾಡಬಹುದು>> ಎಂದು ಅಬೀಮೆಲೆಕನು ಹೇಳಿದನು.
16
ಇದಲ್ಲದೆ ಅವನು ಸಾರಳಿಗೆ, <<ನಿನ್ನ ಅಣ್ಣನಿಗೆ ಸಾವಿರ ರೂಪಾಯಿ ಕೊಟ್ಟಿದ್ದೇನೆ; ನಡೆದದ್ದನ್ನು ನಿನ್ನ ಕಡೆಯವರು ಗಮನಕ್ಕೆ ತೆಗೆದುಕೊಳ್ಳದಂತೆ ಇರಲು ಇದು ಪ್ರಾಯಶ್ಚಿವಾಗಿರಲಿ; ನೀನು ಮಾನಸ್ಥಳೆಂದು ಇದರಿಂದ ಎಲ್ಲರೂ ತಿಳಿದುಕೊಳ್ಳುವರು>> ಎಂದು ಹೇಳಿದನು.
17
ತರುವಾಯ ಅಬ್ರಹಾಮನು ದೇವರನ್ನು ಬೇಡಿಕೊಳ್ಳಲು ದೇವರು ಅಬೀಮೆಲೆಕನನ್ನೂ, ಅವನ ಪತ್ನಿಯನ್ನೂ ಮತ್ತು ದಾಸಿಯರನ್ನೂ ವಾಸಿಮಾಡಿದ್ದರಿಂದ ಅವರಿಗೆ ಮಕ್ಕಳಾದರು.
18
ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಮೊದಲು ಯೆಹೋವನು ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರನ್ನು ಬಂಜೆಯರನ್ನಾಗಿ ಮಾಡಿದ್ದನು.