2

1 ಹೀಗೆ ಭೂಮಿಯು ಆಕಾಶಗಳು ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು. 2 ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. 3 ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡಿದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು. 4 ಯೆಹೋವನಾದ ದೇವರು ಭೂಮಿಯು ಆಕಾಶಗಳನ್ನು ನಿರ್ಮಾಣ ಮಾಡಿದ ಚರಿತ್ರೆ ಇದೇ.

ಏದೆನ್ ಉದ್ಯಾನವನವೂ ಪಾಪೋತ್ಪತ್ತಿಯೂ

5 ಯೆಹೋವನಾದ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ವಿಧವಾದ ಗಿಡವೂ ಭೂಮಿಯಲ್ಲಿ ಇರಲಿಲ್ಲ. ಯಾವ ಸಸ್ಯವೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವನಾದ ದೇವರು ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ. 6 ಆದರೂ ಭೂಮಿಯಿಂದ ನೀರಿನ 1 ಬುಗ್ಗೆ ಉಕ್ಕಿ ಮೇಲೆ ಬಂದು ನೆಲವನ್ನೆಲ್ಲಾ ತೋಯಿಸುತ್ತಿದವು.

7 ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು. 8 ಇದಲ್ಲದೆ ಯೆಹೋವನಾದ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಸೃಷ್ಟಿಸಿ ತಾನು ಉಂಟುಮಾಡಿದ ಮನುಷ್ಯನನ್ನು ಅದರಲ್ಲಿ ತಂಗುವಂತೆ ಮಾಡಿದನು.

9 ಆನಂತರ ಯೆಹೋವನಾದ ದೇವರು ನೋಡುವುದಕ್ಕೆ ರಮ್ಯವಾಗಿಯೂ, ತಿನ್ನುವುದಕ್ಕೆ ಉತ್ತಮವಾಗಿಯೂ ಇರುವ ಎಲ್ಲಾ ತರಹದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯುವಂತೆ ಮಾಡಿದನು. ಅದಲ್ಲದೆ ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷವನ್ನು ಬೆಳೆಯಿಸಿದನು.

10 ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು. 11 ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. 12 ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ. 13 ಎರಡನೆಯ ನದಿಯ ಹೆಸರು ಗೀಹೋನ್, ಅದು 2 ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. 14 ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಶೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೆಟಿಸ್ ನದಿ.

15 ಯೆಹೋವನಾದ ದೇವರು ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇರಿಸಿದನು. 16 ಇದಲ್ಲದೆ ಯೆಹೋವನಾದ ದೇವರು ಆ ಮನುಷ್ಯನಿಗೆ, <<ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು. 17 ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಈ ಮರದ ಹಣ್ಣನ್ನು ಮಾತ್ರ ತಿನ್ನಬಾರದು. ತಿಂದ ದಿನವೇ ಸತ್ತು ಹೋಗುವೆ>> ಎಂದು ಆಜ್ಞಾಪಿಸಿದನು.

18 ಅನಂತರ ಯೆಹೋವನಾದ ದೇವರು, <<ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಯಾದ ಸಹಕಾರಿಯನ್ನು ಉಂಟುಮಾಡುವೆನು>> ಅಂದನು.

19 ಯೆಹೋವನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ, ನೆಲದ ಮಣ್ಣಿನಿಂದ ಸೃಷ್ಟಿಸಿ ಇವುಗಳಿಗೆ ಮನುಷ್ಯನು ಏನೇನು ಹೆಸರಿಡುವನೋ ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳ ಹೆಸರಾಯಿತು. 20 ಹೀಗೆ 3 ಆದಾಮನು ಎಲ್ಲಾ ಪಶುಗಳಿಗೂ, ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಯಾದ ಸಹಕಾರಿ ಸಿಗಲಿಲ್ಲ.

21 ಹೀಗಿರುವಲ್ಲಿ ಯೆಹೋವನಾದ ದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ತುಂಬಿದನು. 22 ಯೆಹೋವನು ಮನುಷ್ಯನಿಂದ ತೆಗೆದ ಎಲುಬನ್ನು, ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು. ಅವನು ಆಕೆಯನ್ನು ನೋಡಿ,
23 <<ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು,
ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.
ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು>> ಅಂದನು.

24 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು.

25 ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.


1 2:6 ಅಥವಾ ಮಂಜು
2 2:13 ಐಥಿಯೋಪ್ಯ
3 2:20 ಮನುಷ್ಯನು