ಅದ್ಯಾಯ 23
ಪಿಲಾತನು ಯೇಸುವನ್ನು ವಿಚಾರಿಸಿ ಆತನಲ್ಲಿ ಅಪರಾಧವಿಲ್ಲವೆಂದು ಕಂಡರೂ ಆತನಿಗೆ ಮರಣದಂಡನೆಯನ್ನು ವಿಧಿಸಿದ್ದು
1
ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಆತನನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋಗಿ –
2
<<ಇವನು ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳುತ್ತಾ ಕೈಸರನಿಗೆ ಸುಂಕ ಕೊಡಬಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸು ಕೆಡಿಸುವುದನ್ನು ನಾವು ಕಂಡಿದ್ದೇವೆ>> ಎಂಬುದಾಗಿ ಆತನ ಮೇಲೆ ದೂರು ಹೇಳುವುದಕ್ಕೆ ತೊಡಗಿದರು.
3
ಪಿಲಾತನು ಯೇಸುವನ್ನು ನೀನು ಯೆಹೂದ್ಯರ ಅರಸನೋ ಎಂದು ಕೇಳಲು, ಆತನು – <<ನೀನೇ ಹೇಳಿದ್ದೀ>> ಎಂದು ಉತ್ತರ ಕೊಟ್ಟನು.
4
ಪಿಲಾತನು ಮುಖ್ಯಯಾಜಕರಿಗೂ ಜನರ ಗುಂಪಿಗೂ - <<ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುತ್ತಿಲ್ಲವೆಂದು>> ಹೇಳಿದನು.
5
ಅದಕ್ಕೆ ಅವರು – <<ಗಲಿಲಾಯದಿಂದ ಮೊದಲುಗೊಂಡು ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆ ಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ>> ಎಂದು ಇನ್ನೂ ಒತ್ತಿ ಹೇಳಿದರು.
6
ಇದನ್ನು ಪಿಲಾತನು ಕೇಳಿ – ಈ ಮನುಷ್ಯನು ಗಲಿಲಾಯದವನೋ ಎಂದು ವಿಚಾರಿಸಿ.
7
ಈತನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು ಎಂದು ತಿಳಿದುಕೊಂಡು ಯೇಸುವನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಆ ದಿವಸಗಳಲ್ಲಿ ಯೆರೂಸಲೇಮಿನಲ್ಲೇ ಇದ್ದನು.
8
ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಯಾಕೆಂದರೆ ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ಕಾಣಬೇಕೆಂದು ಬಹು ಕಾಲದಿಂದ ಅಪೇಕ್ಷಿಸಿದ್ದನು. ಆತನಿಂದ ಯಾವುದಾದರೂ ಒಂದು ಸೂಚಕ ಕಾರ್ಯವಾಗುವುದನ್ನು ನೋಡಬೇಕೆಂದು ನಿರೀಕ್ಷಿಸಿದನು.
9
ಹೆರೋದನು ಅನೇಕ ಮಾತುಗಳಿಂದ ಯೇಸುವನ್ನು ಪ್ರಶ್ನೆ ಮಾಡಿದಾಗ್ಯೂ ಆತನು ಅವನಿಗೆ ಏನೂ ಉತ್ತರ ಕೊಡಲಿಲ್ಲ.
10
ಮುಖ್ಯಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಕುರಿತು ಬಹು ತೀವ್ರವಾಗಿ ಆರೋಪಿಸುತ್ತಿದ್ದರು.
11
ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಯೇಸುವನ್ನು ಅವಮಾನಗೊಳಿಸಿ, ಅಪಹಾಸ್ಯ ಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು.
12
ಅದೇ ದಿನ ಹೆರೋದನು ಪಿಲಾತನೂ ಒಬ್ಬರಿಗೊಬ್ಬರು ಸ್ನೇಹಿತರಾದರು. ಅದಕ್ಕಿಂತ ಮೊದಲು ಅವರಿಬ್ಬರೂ ವೈರಿಗಳಾಗಿದ್ದರು.
13
ತರುವಾಯ ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಪ್ರಜೆಗಳನ್ನೂ ಒಟ್ಟಾಗಿ ಕರಸಿ ಅವರಿಗೆ –
14
<ಈ ಮನುಷ್ಯನು ಪ್ರಜೆಗಳನ್ನು ತಿರುಗಿ ಬೀಳುವಂತೆ ಮಾಡುವವನು ಎಂದು ಈತನನ್ನು ನನ್ನ ಬಳಿಗೆ ಕರತಂದಿರಲ್ಲಾ. ನೀವು ಈತನ ಮೇಲೆ ಮಾಡಿದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆ ಮಾಡಿದರೂ ಈತನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ.
15
ಹೆರೋದನು ಈತನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಆದ್ದರಿಂದ ಈತನು ಮರಣದಂಡನೆಗೆ ಯೋಗ್ಯವಾದದ್ದೇನೂ ಮಾಡಿದವನಲ್ಲವೆಂದಾಯಿತು.
16
ಆದುದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ>> ಎಂದು ಹೇಳಿದನು.
17
ಆದರೆ ಅವರು – <<ಅವನನ್ನು ಕೊಲ್ಲಿಸು
18
ನಮಗೆ ಬರಬ್ಬನನ್ನು ಬಿಟ್ಟುಕೊಡು>> ಎಂದು ಒಟ್ಟಾಗಿ ಕೂಗಿಕೊಂಡರು.
19
ಈ ಬರಬ್ಬನನ್ನು ಆ ಪಟ್ಟಣದಲ್ಲಿ ನಡೆದ ಒಂದು ದಂಗೆಯ ನಿಮಿತ್ತವಾಗಿಯೂ ಕೊಲೆಯ ನಿಮಿತ್ತವಾಗಿಯೂ ಸೆರೆಮನೆಯಲ್ಲಿ ಹಾಕಿದ್ದರು.
20
ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿದ್ದು ತಿರುಗಿ ಅವರ ಸಂಗಡ ಮಾತನಾಡಿದನು.
21
ಆದರೆ ಅವರು – <<ಅವನನ್ನು ಶಿಲುಬೆಗೆ ಹಾಕಿಸು. ಶಿಲುಬೆಗೆ ಹಾಕಿಸು>> ಎಂದು ಕೂಗುತ್ತಿದ್ದರು.
22
ಅವನು ಮೂರನೆಯ ಸಾರಿ - <<ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ ಆದ್ದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ>> ಎಂದು ಅವರಿಗೆ ಹೇಳಿದನು.
23
ಆದರೆ ಅವರು ಜೋರಾಗಿ ಕೂಗುತ್ತಾ - ಅವನನ್ನು ಶಿಲುಬೆಗೆ ಹಾಕಿಸಬೇಕೆಂದು ಕೇಳಿಕೊಂಡು ಬಲವಂತ ಮಾಡಿದರು. ಅವರ ಕೂಗಾಟವು ಗೆದ್ದಿತು.
24
ಆಗ ಪಿಲಾತನು – ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿ
25
ದಂಗೆ ಕೊಲೆಗಳ ನಿಮಿತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು ಯೇಸುವನ್ನು ಅವರ ಚಿತ್ತಾನುಸಾರ ದಂಡಿಸಲು ಒಪ್ಪಿಸಿದನು. ಯೇಸುವನ್ನು ಶಿಲುಬೆಗೆ ಹಾಕಿದ್ದು; ಆತನು ಪ್ರಾಣಬಿಟ್ಟದ್ದು
26
ಅವರು ಯೇಸುವನ್ನು ಕರೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕರೆದು ಶಿಲುಬೆಯನ್ನು ಅವನ ಮೇಲೆ ಹೊರೆಸಿ ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು.
27
ಜನರೂ ಸ್ತ್ರೀಯರೂ ದೊಡ್ಡ ಗುಂಪಾಗಿ ಯೇಸುವಿನ ಹಿಂದೆ ಬಂದರು. ಆ ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿನ ಕುರಿತಾಗಿ ಗೋಳಾಡುತ್ತಾ ಇದ್ದರು.
28
ಯೇಸು ಅವರ ಕಡೆಗೆ ತಿರುಗಿಕೊಂಡು <<ಯೆರೂಸಲೇಮಿನ ಸ್ತ್ರೀಯರೇ ನನಗೋಸ್ಕರ ಅಳಬೇಡಿರಿ ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ.
29
ಯಾಕೆಂದರೆ <ಬಂಜೆಯರೂ ಬಸುರಾಗದವರೂ ಮೊಲೆಕುಡಿಸದವರೂ ಧನ್ಯರು> ಎಂದು ಜನರು ಹೇಳುವ ದಿವಸಗಳು ಬರುತ್ತವೆ.
30
ಆ ಕಾಲದಲ್ಲಿ ಜನರು - <ಬೆಟ್ಟಗಳೇ ನಮ್ಮ ಮೇಲೆ ಬೀಳಿರಿ. ಗುಡ್ಡಗಳೇ ನಮ್ಮನ್ನು ಮುಚ್ಚಿಕೊಳ್ಳಿರಿ> ಅನ್ನುವರು.
31
ಹಸಿ ಮರಕ್ಕೆ ಇಷ್ಟೆಲ್ಲಾ ಮಾಡಿದರೆ ಒಣ ಮರದ ಗತಿ ಏನಾಗಬಹುದು?>> ಅಂದನು.
32
ಆತನ ಸಂಗಡ ಶಿಲುಬೇಗೆರಿಸುವುದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ಕರೆದುಕೊಂಡು ಹೋದರು.
33
ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಯೇಸುವನ್ನೂ ದುಷ್ಕರ್ಮಿಗಳನ್ನು ಶಿಲುಬೆಗೆ ಹಾಕಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯು ಹಾಕಿದರು.
34
ಆಗ ಯೇಸು, <<ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು>> ಅಂದನು. ಆ ಮೇಲೆ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿ ಚೀಟು ಹಾಕಿದರು.
35
ಜನರೆಲ್ಲರೂ ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು ಅವನು ಮತ್ತೊಬ್ಬರನ್ನು ರಕ್ಷಿಸಿದನು, ಅವನು ದೇವರು ಆರಿಸಿಕೊಂಡ ಕ್ರಿಸ್ತನೇ ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಎಂದು ಗೇಲಿಮಾಡಿದರು.
36
ಸಿಪಾಯಿಗಳೂ ಆತನನ್ನು ಪರಿಹಾಸ್ಯ ಮಾಡಿದರು. ಅವರು ಯೇಸುವಿನ ಹತ್ತಿರ ಬಂದು ಹುಳಿಮದ್ಯವನ್ನು ತೋರಿಸಿ -
37
<<ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನು ರಕ್ಷಿಸಿಕೋ>> ಅಂದರು.
38
ಇದಲ್ಲದೆ ಆತನ ಶಿಲುಬೆಯ ಮೇಲೆ <<ಇವನು ಯೆಹೂದ್ಯರ ಅರಸನು>> ಎಂಬುದಾಗಿ ಒಂದು ಸೂಚನಾ ಫಲಕವನ್ನು ಹಾಕಲಾಗಿತ್ತು.
39
ಶಿಲುಬೇಗೆರಿಸಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಯೇಸುವನ್ನು ದೂಷಿಸುತ್ತಾ – <<ನೀನು ಬರಬೇಕಾದ ಕ್ರಿಸ್ತನಲ್ಲವೇ? ನಿನ್ನನ್ನು ರಕ್ಷಿಸಿಕೋ, ನಮ್ಮನ್ನು ರಕ್ಷಿಸು>> ಎಂದು ಹೇಳಿದನು.
40
ಅದಕ್ಕೆ ಎರಡನೆಯವನು ಅವನನ್ನು ಗದರಿಸಿ – <<ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವುದಿಲ್ಲವೋ?
41
ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೇವೆ. ಈತನಾದರೋ ಅಂತಹದ್ದೇನನ್ನೂ ಮಾಡಲಿಲ್ಲ>> ಎಂದು ಹೇಳಿ,
42
<<ಯೇಸುವೇ ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೋ>> ಅಂದನು.
43
ಅದಕ್ಕೆ ಯೇಸು - <<ಈ ಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ>> ಎಂದು ಉತ್ತರಕೊಟ್ಟನು.
44
ಇಷ್ಟರಲ್ಲಿ ಹೆಚ್ಚು ಕಡಿಮೆ ಮಧ್ಯಾಹ್ನವಾಯಿತು.
45
ಸೂರ್ಯನು ಕಾಂತಿಗುಂದಿ ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. ಇದಲ್ಲದೆ ದೇವಾಲಯದ ಪರದೆಯು ನಡುವೆ ಹರಿದು ಹೋಯಿತು.
46
ಆ ಮೇಲೆ ಯೇಸು – <<ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ>> ಎಂದು ಮಹಾಧ್ವನಿಯಿಂದ ಕೂಗಿದನು. ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.
47
ಶತಾಧಿಪತಿಯು ನಡೆದ ಸಂಗತಿಯನ್ನು ನೋಡಿ – <<ಈ ಮನುಷ್ಯನು ನಿಜವಾಗಲೂ ನೀತಿವಂತನೇ>> ಆಗಿದ್ದನು ಎಂದು ದೇವರನ್ನು ಕೊಂಡಾಡಿದನು.
48
ಇದನ್ನು ನೋಡಲು ಸೇರಿ ಬಂದಿದ್ದ ಜನರೆಲ್ಲರು ನಡೆದ ಘಟನೆಯನ್ನು ನೋಡಿ ಎದೆಬಡಿದುಕೊಳ್ಳುತ್ತಾ ಹಿಂತಿರುಗಿ ಹೋದರು.
49
ಇದಲ್ಲದೆ ಆತನ ಪರಿಚಿತರೆಲ್ಲರೂ, ಗಲಿಲಾಯದಿಂದ ಆತನ ಹಿಂದೆ ಬಂದಿದ್ದ ಸ್ತ್ರೀಯರೂ ದೂರದಲ್ಲಿ ನಿಂತು ಈ ಸಂಗತಿಗಳನ್ನು ನೋಡುತ್ತಿದ್ದರು. ಯೇಸುವನ್ನು ಸಮಾಧಿಯಲ್ಲಿ ಇಟ್ಟದ್ದು
50
ಅರಿಮಥಾಯ ಎಂಬುದು ಯೆಹೂದ್ಯರದೊಂದು ಪಟ್ಟಣದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಸೇಫ. ಆತನು ಹಿರೀಸಭೆಯವನು, ಉತ್ತಮನು, ಸತ್ಪುರುಷನು ಹಾಗೂ ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನೂ ಆಗಿದ್ದನಲ್ಲದೆ ಮಂತ್ರಿಯೂ ಆಗಿದ್ದನು.
51
ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಗಳಿಗೂ ಇವನು ಅನುಮತಿಸಿರಲಿಲ್ಲ.
52
ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡು.
53
ಅದನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಅದರಲ್ಲಿ ಅದುವರೆಗೆ ಯಾರನ್ನು ಇಟ್ಟಿರಲಿಲ್ಲ.
54
ಆ ದಿನವು ಸೌರಣೆಯ ದಿನವಾಗಿತ್ತು. ಮತ್ತು ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು
55
ಹೀಗಿರುವಲ್ಲಿ ಗಲಿಲಾಯದಿಂದ ಆತನ ಸಂಗಡ ಬಂದಿದ್ದ ಸ್ತ್ರೀಯರು ಜೊತೆಯಲ್ಲಿ ಅವನ ಹಿಂದೆಯೇ ಹೋಗಿ ಆ ಸಮಾಧಿಯನ್ನೂ ಆತನ ದೇಹವನ್ನಿಟ್ಟ ಸ್ಥಳವನ್ನು ನೋಡಿ,
56
ಹಿಂತಿರುಗಿ ಬಂದು ಪರಿಮಳದ್ರವ್ಯಗಳನ್ನೂ ಸುಗಂಧ ತೈಲವನ್ನೂ ಸಿದ್ಧಮಾಡಿಕೊಂಡರು.